ಪರಿಚಯ

ಪರಮ ದಯಾಮಯನೂ ಕರುಣಾಳುವೂ ಆದ ಅಲ್ಲಾಹನ ನಾಮದಿಂದ ಧರ್ಮದ ನೈಜ ತಿಳುವಳಿಕೆ ಮತ್ತು ಅದರ ಪ್ರಾಮಾಣಿಕ ಅನುಷ್ಥಾನವು ಶಾಂತಿಯುತ ಸಮಾಜದ ಬೆಳವಣಿಗೆಗೆ ಅನಿವಾರ್ಯವಾಗಿದೆ. ಧರ್ಮವು ಬೋಧಿಸುವ ನೈತಿಕ ಮೌಲ್ಯಗಳು ಸಮಾಜದಲ್ಲಿ ಬೆಳೆದು ಬಂದರೆ ಮಾತ್ರ ರಾಷ್ಟ್ರದಲ್ಲಿ ಶಾಶ್ವತ ಶಾಂತಿ, ನೆಮ್ಮದಿ ನೆಲೆಸಬಲ್ಲದು. ಆದರೆ ಇದಕ್ಕೆ ಧರ್ಮದ ನೈಜ ತಿಳುವಳಿಕೆಯ ಅಗತ್ಯವಿದೆ. ಇಸ್ಲಾಮ್ ಧರ್ಮವು ಸಂಪೂರ್ಣ ಮಾನವಕುಲದ ಸರ್ವತೋಮುಖ ಏಳಿಗೆಗೆ ಪೂರಕವಾದ ಉದಾತ್ತ ಮೌಲ್ಯಗಳನ್ನು ಹೊಂದಿದೆ. ಅದು ಕೇವಲ ಕೆಲವು ನಂಬಿಕೆ, ಸಂಪ್ರದಾಯ ಅಥವಾ ಆರಾಧನಾ ವಿಧಿಗಳಿಗೆ ಸೀಮಿತವಾದ ಧರ್ಮವಲ್ಲ. ಮಾನವ ಜೀವನದ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ನೈತಿಕ ಇತ್ಯಾದಿ ಎಲ್ಲ ರಂಗಗಳಿಗೂ ಅನ್ವಯವಾಗುವ ಮಾರ್ಗದರ್ಶನವನ್ನು ಅದು ನೀಡುತ್ತದೆ.

ಈ ಹಿನ್ನಲೆಯಲ್ಲಿ ಕನ್ನಡ ಬಲ್ಲ ಮುಸ್ಲಿಮ್ ಹಾಗೂ ಮುಸ್ಲಿಮೇತರ ಬಾಂಧವರಿಗೆ ಇಸ್ಲಾಮಿನ ಚಿರಂತನ ಮೌಲ್ಯವನ್ನು ಪರಿಚಯಿಸುವುದಕ್ಕಾಗಿ ‘ಶಾಂತಿ ಪ್ರಕಾಶನ’ ಸಂಸ್ಥೆಯನ್ನು ಆರಂಭಿಸಲಾಯಿತು. ಕನ್ನಡಿಗರಾದ ಮುಸ್ಲಿಮರಿಗೆ ಧಾರ್ಮಿಕ ಶಿಕ್ಷಣ ಪಡೆಯುವ ಅನುಕೂಲತೆ ಒದಗಿಸುವುದು ಮತ್ತು ಮುಸ್ಲಿಮೇತರ ಬಾಂಧವರಲ್ಲಿ ಇಸ್ಲಾಮಿನ ಬಗೆಗಿರುವ ಪೂರ್ವಗ್ರಹ ಮತ್ತು ತಪ್ಪು ತಿಳುವಳಿಕೆಗಳನ್ನು ನಿವಾರಿಸುವ ಇಸ್ಲಾಮಿ ಕೃತಿಗಳನ್ನು ಪ್ರಕಟಿಸಿ ಪ್ರಚಾರಪಡಿಸುವುದೇ ಈ ಸಂಸ್ಥೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಈಗಾಗಲೇ ನೂರಾರು ಕೃತಿಗಳನ್ನು ಹೊರ ತಂದಿದೆ.

ಇಸ್ಲಾಮಿನ ಬಾಲಪಾಠದಿಂದ ತೊಡಗಿ ವಿದ್ಯಾವಂತರೂ ಬುದ್ಧಿಜೀವಿಗಳೂ ಆದವರಿಗೆ ಇಸ್ಲಾಮಿನ ಸಂದೇಶವನ್ನು ತಿಳಿಯಪಡಿಸುವಂತಹ ಹಲವು ಕೃತಿಗಳನ್ನು ಸಂಸ್ಥೆಯು ಪ್ರಕಟಿಸಿದೆ. ಕೇವಲ ಅರಬಿ ಭಾಷಾ ಜ್ಞಾನದಿಂದಲೇ ಗ್ರಹಿಸಬೇಕಾಗಿದ್ದ ಇಸ್ಲಾಮಿನ ಮೂಲಗ್ರಂಥವಾಗಿರುವ ಪವಿತ್ರ ಕುರ್ಆನಿನ ಕನ್ನಡ ಅನುವಾದ ಮತ್ತು ವ್ಯಾಖ್ಯಾನ ಗ್ರಂಥಗಳು ಕನ್ನಡ ಜನಕೋಟಿಗೆ ಶಾಂತಿ ಪ್ರಕಾಶನದ ಆಮೂಲ್ಯ ಕೊಡುಗೆಯಾಗಿದೆ.

‘ಶಾಂತಿ ಪ್ರಕಾಶನ’ ಹೊರತಂದ ಕುರ್ಆನ್ ವ್ಯಾಖ್ಯಾನ ಮತ್ತು ಇತರ ಕೃತಿಗಳು ಕನ್ನಡ ಸಾಹಿತ್ಯ ಲೋಕದ ಅನೇಕರ ಪ್ರಶಂಸೆಗೆ ಪಾತ್ರವಾಗಿದೆ. ಜನತೆ ಮುಸ್ಲಿಮ್ ಹಾಗೂ ಮುಸ್ಲಿಮೇತರ ಬುದ್ಧಿಜೀವಿಗಳಿಗೆ ಇಸ್ಲಾಮಿನ ಪರಿಚಯ ನೀಡುವ ಹಲವು ಉಪಯುಕ್ತ ಗ್ರಂಥಗಳನ್ನು ನಮ್ಮ ಸಂಸ್ಥೆಯ ವತಿಯಿಂದ ಪ್ರಕಟಿಸಲಾಗಿದೆ ಹಾಗೂ ಇನ್ನೂ ಅನೇಕ ಕೃತಿಗಳು ರಚನೆ ಮತ್ತು ಮುದ್ರಣದ ವಿವಿಧ ಹಂತಗಳಲ್ಲಿವೆ.

ಶಾಂತಿ ಪ್ರಕಾಶನ ಒಂದು ವ್ಯಾಪಾರಿ ಸಂಸ್ಥೆಯಲ್ಲ. ಧಾರ್ಮಿಕ ಮೌಲ್ಯಗಳ ಪ್ರಚಾರದಿಂದ ಮಾನವ ಸಮಾಜದಲ್ಲಿ ಶಾಂತಿ, ಸಹೋದರತೆ, ಸಮಾನತೆ, ಪರಸ್ಪರ ನಂಬಿಕೆ, ಸತ್ಯ, ನ್ಯಾಯ, ನೈತಿಕತೆ ನೆಲೆಸಿ ಜನತೆಯ-ಸಮಾಜದ-ರಾಷ್ಟ್ರದ ಸರ್ವತೋಮುಖ ಕಲ್ಯಾಣವಾಗಬೇಕೆಂಬ ಪ್ರಾಮಾಣಿಕ ಕಳಕಳಿಯೇ ಶಾಂತಿ ಪ್ರಕಾಶನದ ಚಾಲಕ ಶಕ್ತಿಯಾಗಿದೆ. ಸರ್ವಶಕ್ತನಾದ ದೇವನು ನಮ್ಮ ಈ ಸದುದ್ದೇಶವನ್ನು ಈಡೇರಿಸಲಿ.

Post a Reply

Your email address will not be published. Required fields are marked *